ಪ್ರಭು ಭೋಜನ -
ಶಿಲುಬೆಗೇರುವ ಮುನ್ನಾದಿನ ಯೇಸುಪ್ರಭು ತನ್ನ ಶಿಷ್ಯರೊಡಗೂಡಿ ಮಾಡಿದ ಭೋಜನ, ಸಂಬಂಧಪಟ್ಟ ಸ್ತ್ರೋತ್ರಪಾಠಗಳು, ವ್ರತಾಚರಣೆ ಮತ್ತು ಆರಾಧನೆ-ಇವಿಷ್ಟನ್ನು ಪ್ರಭುಭೋಜನ ಎಂಬ ಮಾತು (ಮಾಸ್) ಸೂಚಿಸುತ್ತದೆ.

	ಭೋಜನ ಸಮಯದಲ್ಲಿ ಯೇಸು ರೊಟ್ಟಿಯನ್ನು ಮುರಿದು 'ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ; ಇದನ್ನು ನನ್ನ ಸ್ಮರಣೆಗಾಗಿ ಊಟ ಮಾಡಿ, ಎಂದನಲ್ಲದೆ ಭೋಜನ ತೀರಿದ ಬಳಿಕ ದ್ರಾಕ್ಷಾರಸ ತುಂಬಿದ ಪಾತ್ರೆಯನ್ನು ತೆಗೆದುಕೊಂಡು "ಈ ಪಾತ್ರೆಯಲ್ಲಿರುವುದು ಹೊಸ ಮತ್ತು ಅನಂತರದ ಒಡಂಬಡಿಕೆಯ ನನ್ನ ರಕ್ತ. ಇದನ್ನು ನಿಮ್ಮ ಹಾಗೂ ಎಲ್ಲ ಮಾನವರ ಪಾಪ ಪರಿಹಾರಕ್ಕಾಗಿ ಸುರಿಸಲಾಗುವುದು. ನೀವು ಈ ರೊಟ್ಟಿಯನ್ನು ಭುಜಿಸಿದಾಗ ಮತ್ತು ಈ ಪಾತ್ರೆಯಲ್ಲಿನದನ್ನು ಪಾನ ಮಾಡಿದಾಗ ಪ್ರಭುವಿನ ಮರಣವನ್ನು-ಮತ್ತೆ ಅವನ ಪುನರಾಗಮನವಾಗುವ ತನಕ-ಸಾರುವಿರಿ" ಎಂದ.

	ಹೀಗೆ ಕೊನೆಯ ಭೋಜನದಲ್ಲಿ ಯೇಸು ಸ್ವಾರ್ಪಣೆ ಮಾಡಿ ಭಾವೀ ಬಲಿಯ ಪೂರ್ವಸೂಚನೆಯನ್ನು ಕೊಟ್ಟಿದ್ದು ಮಾತ್ರವಲ್ಲದೆ, ಸಂಕೇತಗಳ ಮೂಲಕ ಆ ಬಲಿಯನ್ನು ಸಾಕ್ಷಾತ್ಕರಿಸಿದ. ಆದುದರಿಂದ ಈ ಭೋಜನ ಕಾಲ್ವರಿ ಬಲಿಯ ಅವಿಭಾಜ್ಯ ಅಂಗವೇ ಹೌದು.

	ಯೇಸುವಿನ ರಾಜ್ಯದ ನಿರೀಕ್ಷೆ, ಅವನ ಬೀಳ್ಕೊಡುಗೆಯ ಸ್ಮರಣೆ, ಅವರ ಬಲಿದಾನದ ಸಾಕ್ಷಾತ್ಕಾರ, ಪರಮಾತ್ಮನ ಮತ್ತು ಮನುಷ್ಯನ ನಡುವಿನ ಒಡಂಬಡಿಕೆ ಪಾಪದ ಪರಿಹಾರ ಹಾಗೂ ಕ್ರೈಸ್ತರ ಅನ್ಯೋನ್ಯ ಪ್ರೇಮದ ಕಾರಣ ಹಾಗೂ ಸಂಕೇತ-ಇವು ಪ್ರಭು ಭೋಜನದಲ್ಲಿವೆ.

	ಕ್ರೈಸ್ತರು ಪ್ರಭುಭೋಜನಕ್ಕೆಂದು ಕ್ರೈಸ್ತಪುರೋಹಿತನೊಡನೆ ಬಲಿಪೀಠದ ಸಾನಿಧ್ಯದಲ್ಲಿ ಒಟ್ಟುಗೂಡಿದಾಗ ತಾವೆಲ್ಲರೂ ಒಂದೇ ಆಗಿದ್ದೇವೆ. ಕ್ರಿಸ್ತನಿಂದ ರಕ್ಷಿಸಲ್ಪಟ್ಟಿದ್ದೇವೆ ಎಂಬ ಮನವರಿಕೆಯುಳ್ಳವರಾಗಿರುತ್ತಾರೆ. ಯೇಸು ಭೋಜನಕ್ಕೆ ಕೊಟ್ಟ ಆಹ್ವಾನವೇ ಈ ನೆರವಿಗೆ ಕಾರಣ. ಇದೊಂದು ಪುನರ್ಮಿಲನ. ಪರಮಾತ್ಮ ವಾಣಿಯಾದ ಬೈಬಲ್ ವಾಚನದ ಮುಖೇನ ಈ ಸಭೆಯಲ್ಲಿ ಯೇಸು ಮೊದಲು ಪ್ರತ್ಯಕ್ಷನಾಗಿ ಭಕ್ತರ ಪರಸ್ಪರ ಸ್ನೇಹಬಾಂಧವ್ಯಕ್ಕೆ ಕಾರಣನಾಗುತ್ತಾನೆ.

	ಹೀಗೆ ಕ್ರೈಸ್ತ ಪೂಜಾಪದ್ಧತಿಯಲ್ಲಿ (ಲಿಟರ್ಜಿ) ಪ್ರಭುಭೋಜನಕ್ಕೆ ಪ್ರಮುಖ ಸ್ಥಾನವಿದೆ. 
(ಡಿ.ವಿ.ಡಬ್ಲ್ಯೂ.; ಡಿ.ಪಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ